ಕನಕದಾಸ : 1509-1607. ಕನ್ನಡ ಹರಿದಾಸರಲ್ಲಿ ಒಬ್ಬ. ಪುರಂದರದಾಸನಷ್ಟೇ ಪ್ರಸಿದ್ಧ. ಇವರಿಬ್ಬರೂ ಸಮಕಾಲೀನರಾಗಿದ್ದುದಲ್ಲದೆ ವ್ಯಾಸರಾಯನ ನೇತೃತ್ವದಲ್ಲಿ ಹರಿದಾಸ ಪಂಥದಲ್ಲಿ ಸಂತತವಾಗಿ ಶ್ರಮಿಸಿದವರಾಗಿರುತ್ತಾರೆ. ಪುರಂದರದಾಸ ತನ್ನ ಒಂದು ಕೀರ್ತನೆಯಲ್ಲಿ ಕನಕದಾಸನ ಮೇಲೆ ದಯೆ ಮಾಡಲು ವ್ಯಾಸ ಮುನಿಯ ಮಠದವರೆಲ್ಲ ದೂರಿಕೊಳ್ಳುವರು-ಎಂದು ಹೇಳಿರುವುದನ್ನು ನೋಡಿದರೆ ವ್ಯಾಸರಾಯ ಕನಕದಾಸನಿಗೆ ತನ್ನಲ್ಲಿ ಆಶ್ರಯವಿತ್ತುದನ್ನು ಅನೇಕರು ಸಹಿಸಲಿಲ್ಲವೆಂಬುದು ಸೂಚಿತವಾಗುತ್ತದೆ. ಕನಕದಾಸ ಜನ್ಮತಃ ಬ್ರಾಹ್ಮಣನಲ್ಲವೆಂಬುದೇ ಇದಕ್ಕೆ ಕಾರಣವಿರಬಹುದು. ಕನಕದಾಸ ಕಾಗಿನೆಲೆಯ ಸಮೀಪದಲ್ಲಿ ಇಂದಿಗೂ ವಾಸಿಸುತ್ತಿರುವ ದಾಸರೆಂಬ ಒಂದು ಬುಡಕಟ್ಟಿಗೆ ಸೇರಿದವನಿರಬಹುದೆಂದು ಕೆಲವರ ಅಭಿಪ್ರಾಯ. ಈ ಮತೀಯರು ರಾಮಾನುಜ ಪಂಥಕ್ಕೆ ಸೇರಿದ ಆನೆಗೊಂದಿಯ ಸಮಯಾಚಾರಿಗಳ ಆನುಯಾಯಿಗಳು. ಕನಕದಾಸ    ತನ್ನ ಮೋಹನತರಂಗಿಣಿಯಲ್ಲಿ ರಾಮಾನುಜಾಚಾರ್ಯರನ್ನೂ ತಾತಾಚಾರ್ಯರನ್ನೂ ಸ್ತುತಿಸಿರು ವುದನ್ನು ಗಮನಿಸಿದರೆ ಈತನ ಶ್ರೀವೈಷ್ಣವಭಕ್ತಿಗೆ ಕಾರಣವೇನೆಂಬುದು ಧ್ವನಿತವಾಗುತ್ತದೆ. ಆದರೆ ಕನಕದಾಸ ತನ್ನ ಕೀರ್ತನೆಯಲ್ಲಿ ಬೀರೇದೇವರನ್ನು ಕೊಂಡಾಡಿರುವುದನ್ನು ಲಕ್ಷಿಸಿ ಆತ ಕುರುಬನೆಂದೂ ಇಲ್ಲವೇ ಬೇಡರ ಬುಡಕಟ್ಟಿನ ನಾಯಕ ಪಂಥದವ ನೆಂದೂ ಹೇಳುವವರೂ ಇದ್ದಾರೆ. ಈ ವಿಚಾರಗಳು ಹೇಗೆಯೇ ಇರಲಿ, ಕನಕದಾಸ ಕನ್ನಡ ನಾಡಿನ ಹರಿಭಕ್ತವರೇಣ್ಯರಲ್ಲಿ ಒಬ್ಬನೆನ್ನಲು ಯಾವ ಸಂದೇಹವೂ ಇಲ್ಲ. ಈತ ಕಾಗಿನೆಲೆಯಲ್ಲಿ ಹುಟ್ಟಿ, ಬೆಳೆದು, ಬಾಡವೆಂಬ ಪ್ರದೇಶದಲ್ಲಿ ನಾಯಕ ನಾಗಿ ಆಡಳಿತ ನಡೆಸಿ, ಯಾವುದೋ ಒಂದು ಕಾಳಗದಲ್ಲಿ ಸೋಲಾಗಲು, ಪರಮಾತ್ಮನ ಅನುಗ್ರಹದಿಂದ ಚೇತರಿಸಿ ಕೊಂಡು, ಹರಿದಾಸನಾದಂತೆ ಆತನ ಮಾತುಗಳಿಂದಲೇ ತಿಳಿದು ಬರುತ್ತದೆ. ಈ ರೀತಿ ಕನಕನಾಯಕ ಕತ್ತಿಯನ್ನು ಬಿಸುಟು ತಾಳ ತಂಬೂರಿಗಳನ್ನು ಹಿಡಿದು ಹೊರಡುವ ಪರಿವರ್ತನೆ ತುಂಬ ವಿಸ್ಮಯಕಾರಿಯಾದುದೇ ಸರಿ. ಈತನ ಆರಾಧ್ಯದೇವತೆ ಆದಿಕೇಶವ.

ಕನಕದಾಸ ಭಾವಪುರ್ಣವಾದ ಅನೇಕ ಕೀರ್ತನೆಗಳನ್ನು ರಚಿಸಿರುವನಲ್ಲದೆ, ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತೆ ಮತ್ತು ನೃಸಿಂಹಸ್ತವ ಎಂಬ ಕೃತಿಗಳನ್ನೂ ಬರೆದಿದ್ದಾನೆ. ಆದ್ದರಿಂದ ಕನ್ನಡ ಹರಿದಾಸರಲ್ಲಿ ಕನಕದಾಸನ ಸ್ಥಾನ ತುಂಬ ವಿಶಿಷ್ಟವಾದುದು.

ಕನಕದಾಸನ ಕೀರ್ತನೆಗಳು ಸಂಖ್ಯಾದೃಷ್ಟಿಯಿಂದ ಕಡಿಮೆಯೆನ್ನಿಸಿದರೂ ಗುಣದ ದೃಷ್ಟಿಯಿಂದ ಮಿಗಿಲಾಗಿವೆ. ಈತನ ಮುದ್ರಿಕೆ ಕಾಗಿನೆಲೆಯ ಆದಿಕೇಶವನ ಹೆಸರಿನದಾಗಿದೆ. ತಲ್ಲಣಿಸದಿರು ಕಂಡ್ಯ ತಾಳು ಮನವೆ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ-ಎಂಬ ಸುಪ್ರಸಿದ್ಧವಾದ ಕೀರ್ತನೆಯನ್ನು ಗಮನಿಸಿದರೆ ಕನಕ ಎಂಥ ಆಶಾವಾದಿಯೆಂಬುದು ಸ್ಪಷ್ಟವಾಗುತ್ತದೆ. ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ-ಎಂಬ ಮತ್ತೊಂದು ಕೀರ್ತನೆಯ ಧಾಟಿಯಲ್ಲಿ ಕನಕನ ಜನ್ಮವೃತ್ತಾಂತವೇ ಪ್ರತಿಬಿಂಬಿಸಿದ್ದು, ಸಂಪ್ರದಾಯವಾದಿಗಳನ್ನು ಕುರಿತ ಎಚ್ಚರಿಕೆಯ ಮಾತಿನ ಚುಚ್ಚು ಎದ್ದುಕಾಣುತ್ತದೆ. ಕೀರ್ತನೆಗಳಲ್ಲಿ ಅನೇಕ ಕಡೆ ಕಂಡುಬರುವ ಇಂಥ ಕೆಚ್ಚಿನ ನುಡಿಗಳು ಗಮನಾರ್ಹವಾದುವು. ದೈವಭಕ್ತಿ, ಜೀವನದರ್ಶನ, ಸಮಾಜವಿಮರ್ಶೆ, ಲೋಕಾನುಭವ ಗಳೆಲ್ಲವೂ ಈ ಕೀರ್ತನೆಗಳಲ್ಲಿ ತುಂಬಿ ತುಳುಕುತ್ತವೆ. ವಚನಸಾಹಿತ್ಯದಲ್ಲಿ ಕಂಡುಬರುವ ಬೆಡಗಿನ ವಚನಗಳಂತೆ ಕನಕದಾಸನ ಮುಂಡಿಗೆಗಳು ಇಂದಿಗೂ ಬಿಡಿಸಲಾರದ ಕಗ್ಗಂಟಿನಂತಿವೆ.

ಕನಕದಾಸನು ಬರೆದಿರುವ ಕಾವ್ಯಗಳೂ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ. 42 ಸಂಧಿಗಳುಳ್ಳ ಸಾಂಗತ್ಯ ಕೃತಿಯಾದ ಮೋಹನತರಂಗಿಣಿಯಲ್ಲಿ ಶಂಬರಾಸುರ ಮತ್ತು ಬಾಣಾಸುರರ ವಧೆಗಳು ನಿರೂಪಿತವಾಗಿವೆ. ಈ ಎರಡು ಪ್ರಸಂಗಗಳನ್ನೂ ಒಂದೇ ಕಾವ್ಯದಲ್ಲಿ ಅಳವಡಿಸಿರುವ ಕನಕದಾಸನ ಕೌಶಲ ಮೆಚ್ಚುವಂಥದು. ಕಾವ್ಯದ ಪುರ್ವಾರ್ಧದಲ್ಲಿ ಪ್ರದ್ಯುಮ್ನ ಪ್ರಧಾನ ಪಾತ್ರ ವಹಿಸಿದರೆ ಉತ್ತರಾರ್ಧದಲ್ಲಿ ಶ್ರೀಕೃಷ್ಣನ ಪ್ರಭಾವ ಮಿಗಿಲಾಗಿ ಕಾಣುತ್ತದೆ. ಉಷಾ-ಅನಿರುದ್ಧರ ಪ್ರಣಯವೃತ್ತಾಂತ ಇಲ್ಲಿನ ಬಿರುಸು ಕಾಳಗಗಳ ಮಧ್ಯೆ ಒಂದು ರಮಣೀಯ ಪ್ರಪಂಚವನ್ನೇ ಸೃಷ್ಟಿಸುತ್ತದೆ. ಕನಕದಾಸನ ಯುದ್ಧಾನುಭವ ಮತ್ತು ಸಾಹಿತ್ಯ ಪರಿಶ್ರಮಗಳು ಈ ಕೃತಿಯಲ್ಲಿ ಮೂರ್ತಿಭವಿಸಿವೆ. ಹರಿಭಕ್ತಿಯ ಹಿರಿಮೆಯನ್ನೂ ಹರಿಭಕ್ತಿಯ ನಿಲುವನ್ನೂ ಇಲ್ಲಿ ಸಂದರ್ಭೋಚಿತವಾಗಿ ಕಾಣಬಹುದು. ಇಲ್ಲಿನ ಅನೇಕ ವರ್ಣನೆಗಳಲ್ಲಿ ಸಮಕಾಲೀನ ಜೀವನದ ಪ್ರತಿಬಿಂಬಗಳಿವೆ. ಒಟ್ಟಿನಲ್ಲಿ ಈ ಸಾಂಗತ್ಯಕೃತಿ ಕನಕದಾಸನೇ ಹೇಳಿಕೊಂಡಿರುವಂತೆ ‘ಹರಿಶರಣರಚ್ಚು’ ಬುಧ ಜನರಿಗೆ ಪೆಚ್ಚು, ದುರಿತವನಕೆ ಕಾಳ್ಕಿಚ್ಚು, ವಿರಹಿಗಳಿಗೆ ಪುಚ್ಚು, ವೀರರ್ಗೆ ನುಚ್ಚು, ಕೇಳ್ವರಿಗಿದು ತನಿಬೆಲ್ಲದಚ್ಚು.
ಹರಿಭಕ್ತಿಸಾರದಲ್ಲಿ ಕನಕನ ಹರಿಭಕ್ತಿಯ ತುಂಬುವೊನಲನ್ನು ಕಾಣಬಹುದು. ರಕ್ಷಿಸು ನಮ್ಮನನವರತ-ಎಂದು ಪ್ರತಿ ಪದ್ಯದಲ್ಲಿಯೂ ಬರುವ ಈ ಚರಣವಂತೂ ಕನ್ನಡಿಗರಿಗೆ ಚಿರಪರಿಚಿತವಾದ ನುಡಿಯಾಗಿದೆ. ಇದನ್ನು ಒಂದು ರೀತಿಯಲ್ಲಿ ಶತಕವೆನ್ನಬಹುದು (ಒಟ್ಟು 110 ಪದ್ಯಗಳಿವೆ). ಭಾಮಿನೀಷಟ್ಪದಿಯ ಧಾಟಿಯಲ್ಲಿ ಬರೆದಿರುವ ಇಲ್ಲಿನ ಅನೇಕ ಪದ್ಯಗಳು ಪಂಡಿತ, ಪಾಮರರ ಆದರಕ್ಕೆ ಪಾತ್ರವಾಗಿವೆ. ಭಕ್ತಿಸಾರದ ಚರಿತೆಯನು ಹರಿಭಕ್ತರಾಲಿಸುವಂತೆ ರಚಿಸುವೆ-ಎಂದು ಕನಕದಾಸ ಸ್ಪಷ್ಟಪಡಿಸಿ ಭಕ್ತಿಯ ಮಹಿಮಾತಿಶಯ ಗಳನ್ನು ನಾನಾ ತೆರನಾಗಿ ಇದರಲ್ಲಿ ಚಿತ್ರಿಸಿದ್ದಾನೆ. ಕನಕನ ತತ್ತ್ವಜ್ಞಾನ, ಜೀವನಾದರ್ಶ, ಲೋಕನೀತಿಗಳು ಇಲ್ಲಿ ತಿಳಿಯಾದ ಕನ್ನಡ ನುಡಿಗಳಲ್ಲಿ ಸರ್ವರಿಗೂ ಸುಲಭಗ್ರಾಹ್ಯವಾಗುವಂತೆ ಪ್ರತಿಪಾದಿತವಾಗಿವೆ.

ನಳಚರಿತ್ರೆಯಂತೂ ಆಬಾಲವೃದ್ಧರಿಗೆ ಆಪ್ಯಾಯಮಾನವೆನ್ನಿಸಿದೆ. ಮಹಾಭಾರತದಲ್ಲಿ ಉಕ್ತವಾಗಿರುವ ನಳೋಪಾಖ್ಯಾನವನ್ನು ಕವಿ ಭಾಮಿನೀಷಟ್ಟದಿಯಲ್ಲಿ ಬಹಳ ಮನಕರಗುವಂತೆ ನಿರೂಪಿಸಿದ್ದಾನೆ. ಕೇವಲ ಒಂಬತ್ತು ಸಂಧಿಗಳಲ್ಲಿ ನಳನ ಕಥೆಯನ್ನು ಲಲಿತವಾಗಿ ಹೇಳಿರುವ ಕನಕನ ಜಾಣ್ಮೆ ಮೆಚ್ಚತಕ್ಕದ್ದಾಗಿದೆ. ರಾಜನಾದರೂ ನಳನಷ್ಟು ನರಳಿದವರು ವಿರಳ. ಇದಕ್ಕೆ ವಿಧಿಯೇ ಕಾರಣ. ಕನಕ ತನ್ನ ಕೀರ್ತನೆಗಳಲ್ಲಿ ದೈವಬಲವನ್ನು ಕುರಿತು ಬಗೆಬಗೆಯಾಗಿ ಬಣ್ಣಿಸಿದ್ದಾನೆ. ಅದಕ್ಕೆ ತಕ್ಕ ನಿದರ್ಶನವೋ ಎಂಬಂತಿದೆ-ಈ ನಳನ ಕಥೆ. ನಳಮಹಾರಾಜನ ವೈಭವದ ಹಿನ್ನೆಲೆಯಲ್ಲಿ ಅವನಿಗೆ ಕಲಿಪುರುಷನಿಂದ ಪ್ರಾಪ್ತವಾದ ದುರ್ದೆಸೆಯನ್ನು ಕಂಡರೆ ಎಂಥವರಿಗಾದರೂ ತಲ್ಲಣಿಸುವಂತಾಗುತ್ತದೆ. ಕಾಡಿನಲ್ಲಿ ಏಕಾಂಗಿಯಾಗಿ ಅಲೆದಾಡುವ ದಮಯಂತಿಯನ್ನು ವರ್ಣಿಸುವ ಸಂದರ್ಭವಾಗಲಿ, ಕಾರ್ಕೋಟಕನ ಕಡಿತದಿಂದ ಕುರೂಪಿಯಾಗುವ ನಳನನ್ನು ಚಿತ್ರಿಸುವ ಸನ್ನಿವೇಶವಾಗಲಿ ಹೃದಯವಿದ್ರಾವಕವಾದುದು. ಕಟ್ಟಕಡೆಯಲ್ಲಿ ನಳನ ನಿಷ್ಠೆ ಅವನನ್ನು ಕಾಪಾಡಿದಂತೆ, ದಮಯಂತಿಯ ಪತಿಭಕ್ತಿ, ಆಕೆಯ ಜೀವನವನ್ನು ಸಂರಕ್ಷಿಸುತ್ತದೆ. ನಳ-ದಮಯಂತಿಯರ ಚಿರಂತನಪ್ರೇಮ ಕಾವ್ಯದ ಪ್ರಮುಖಶಕ್ತಿಗಳಲ್ಲಿ ಒಂದಾಗಿ ನಿಂತು ಇಡೀ ಪ್ರಸಂಗ ಪ್ರಶಂಸಾರ್ಹವೆನ್ನಿಸುತ್ತದೆ. ಸುಲಭ ಶೈಲಿ, ಘನವಾದ ವಸ್ತು, ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ನಳಚರಿತ್ರೆ ಕನ್ನಡಕ್ಕೆ ಅಪುರ್ವ ಕೊಡುಗೆಯಾಗಿದೆ.

ರಾಮಧಾನ್ಯಚರಿತ್ರೆ ಎಂಬ ಇನ್ನೊಂದು ಕೃತಿ, ಗಾತ್ರದಲ್ಲಿ ಕಿರಿದಾದರೂ ಗುಣದಲ್ಲಿ ಅದ್ವಿತೀಯವೆನ್ನಿಸಿದೆ. ರಾಗಿ ಮತ್ತು ಅಕ್ಕಿಗಳ ಕಲಹವೇ ಈ ಕೃತಿಯ ವಸ್ತುವಾದರೂ ಕವಿ ಇದಕ್ಕೆ ಒಂದು ಪೌರಾಣಿಕ ಹಿನ್ನೆಲೆಯನ್ನು ಕಲ್ಪಿಸಿರುವುದು ನವೀನವಾಗಿದೆ. ಶ್ರೀರಾಮನ ಸಾನ್ನಿಧ್ಯದಲ್ಲಿ ರಾಗಿ-ಅಕ್ಕಿಗಳಲ್ಲಿ (ನರೆದಲೆಗ ಮತ್ತು ವ್ರೀಹಿ) ಯಾರು ಮೇಲು ಎಂಬ ವಾಗ್ವಾದವುಂಟಾಗಲು ರಾಮ ಅಯೋಧ್ಯೆಗೆ ಹಿಂತಿರುಗಿದ ಮೇಲೆ, ಕಾಲಾನಂತರದಲ್ಲಿ ಸೆರೆಯಲ್ಲಿದ್ದ ಈ ಧಾನ್ಯಗಳನ್ನು ಕರೆತರಿಸಲು, ಅಕ್ಕಿ ಮುಗ್ಗಿ ಹೋಗಿರುವುದನ್ನು ರಾಗಿ ದೃಢವಾಗಿರುವುದನ್ನೂ ಕಂಡು, ದೇವಾನು ದೇವತೆಗಳ ಸಮ್ಮುಖದಲ್ಲಿ ರಾಗಿಗೆ ರಾಘವಧಾನ್ಯ ಎಂಬ ಹೆಸರನ್ನಿತ್ತು ಗೌರವಿಸುತ್ತಾನೆ. ಇಷ್ಟೇ ಇಲ್ಲಿನ ತಿರುಳು. ಆದರೆ ಕುಶಲ ಕವಿಯಾದ ಕನಕದಾಸ ಈ ಪ್ರಸಂಗವನ್ನು ಬಹು ಸ್ವಾರಸ್ಯವಾಗಿ ಚಿತ್ರಿಸಿದ್ದಾನೆ. ಬಡವರ ಆಧಾರವಾದ ರಾಗಿಗೂ ಭಾಗ್ಯವಂತರ ಬಂಧುವಾದ ಅಕ್ಕಿಗೂ ಇರುವ ತಾರತಮ್ಯವನ್ನು ನಿರೂಪಿಸುವಲ್ಲಿ, ಇಂದಿನಂತೆಯೇ ಅಂದಿನ ಸಮಾಜದಲ್ಲಿಯೂ ನೆಲೆಸಿದ್ದ ದೀನ ಧನಿಕರ ಅಂತರವನ್ನು ಬಹಳ ಅರ್ಥವತ್ತಾಗಿ ಎತ್ತಿ ತೋರಿಸಿದ್ದಾನೆ. ಇದೊಂದು ವ್ಯಂಗ್ಯ ಕಾವ್ಯ. ಕನ್ನಡದಲ್ಲಿ ಅಂದಿಗೆ ಇಂಥ ಪ್ರಯತ್ನ ತುಂಬ ಅಪುರ್ವವಾದುದು. ಈ ಕಥೆಗೆ ಆಧಾರವೇನೋ ತಿಳಿಯದು. ಬಹುಶಃ ಕನಕದಾಸ ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಜಾನಪದ ಕಥೆಯೊಂದನ್ನು ಅವಲಂಬಿಸಿ, ಈ ಕೃತಿಯನ್ನು ಬರೆದಿರಬೇಕೆನ್ನಿಸುತ್ತದೆ. ಎಂದಿನಂತೆಯೇ ಭಾಮಿನೀಷಟ್ಪದಿಯ ಲಯ, ರಾಗಿ ಮತ್ತು ಅಕ್ಕಿಗಳ ಮಧ್ಯೆ ನಡೆಯುವ ಸಂವಾದ ಶೈಲಿ, ನಿಷ್ಪಕ್ಷಪಾತಿಯಾದ ಶ್ರೀರಾಮನ ವರ್ತನೆಗಳು ಮನನೀಯವಾಗಿವೆ. ಕುಲದ ಬಗ್ಗೆ ಕನಕದಾಸ ಪರೋಕ್ಷವಾಗಿ ತನ್ನ ನಿಲುವನ್ನು ಈ ಕೃತಿಯಲ್ಲಿ ಹೇಗೆ ಸಾಂಕೇತಿಕವಾಗಿ ವ್ಯಕ್ತಪಡಿಸಿದ್ದಾನೆಂಬುದನ್ನು ಮನಗಂಡರೆ ಈ ರಚನೆಯ ಸ್ವಾರಸ್ಯ ಮತ್ತಷ್ಟು ಮಿಗಿಲಾಗುತ್ತದೆ.
ನೃಸಿಂಹಸ್ತವ ಎಂಬ ಮತ್ತೊಂದು ಕೃತಿಯನ್ನು ಕವಿಚರಿತೆಕಾರರು ಪ್ರಸ್ತಾಪಿಸಿದ್ದಾರೆ. ಅದು ಒಂದು ಸಾಂಗತ್ಯಕೃತಿಯೆಂದು ತಿಳಿದುಬರುತ್ತದೆ. ಗ್ರಂಥ ಉಪಲಬ್ಧವಿಲ್ಲ. ಕನ್ನಡಿಗರಿಗೆ ಚಿರಪರಿಚಿತವಾದ ತಿರುಕನ ಕನಸು ಎಂಬ ಸಣ್ಣ ಕೃತಿ ಕನಕದಾಸನದೆಂದು ಕೆಲವರೂ ಮುಪ್ಪಿನ ಷಡಕ್ಷರಿಯದೆಂದು ಇತರರೂ ಹೇಳುವುದುಂಟು. ಹಳೆಯ ಹಸ್ತಪ್ರತಿಗಳು ದೊರೆತಲ್ಲಿ ಈ ಅಂಕಿತಪಲ್ಲಟ ಹೇಗಾಯಿತೆಂಬುದನ್ನು ನಿರ್ಣಯಿಸಬಹುದು. ತಿರುಕನ ಕನಸಿನ ಕಥೆ ಸರ್ವರಿಗೂ ತಿಳಿದುದೇ ಆಗಿದೆ. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿಸಿಕೊಂಡ ಎಂಬ ಗಾದೆಯಂತೆ ಈ ಕೃತಿಯಲ್ಲಿ ಬಡವನ ವಿಡಂಬನೆಯಿದೆ. ಈ ರಚನೆಯ ಕರ್ತೃವಿನ ವಿಚಾರದಲ್ಲಿ ಸಂದೇಹ ತಲೆದೋರಿರುವುದರಿಂದ ಇದನ್ನು ಪ್ರತ್ಯೇಕವಾಗಿಯೇ ಪರಿಶೀಲಿಸುವುದು ಸೂಕ್ತವೆನ್ನಿಸುತ್ತದೆ.

ಒಟ್ಟಿನಲ್ಲಿ, ಕನಕದಾಸ ತನ್ನ ಕೃತಿಗಳಲ್ಲಿ ವ್ಯಕ್ತಪಡಿಸಿರುವ ರಾಮಾಯಣ, ಮಹಾಭಾರತ ಮತ್ತು ಭಾಗವತಗಳ ಜ್ಞಾನ, ಕೀರ್ತನೆಗಳಲ್ಲಿ ನಿರೂಪಿಸಿರುವ ಭಕ್ತಿ, ಜ್ಞಾನ, ವೈರಾಗ್ಯಗಳ ಪ್ರಜ್ಞೆ, ತಿಳಿಗನ್ನಡದ ಒಲವು-ಇವೇ ಮೊದಲಾದುವು ಹರಿದಾಸ ಪ್ರಪಂಚದಲ್ಲಿ ಮತ್ತು ಕನ್ನಡ ಕಾವ್ಯಕ್ಷೇತ್ರದಲ್ಲಿ ಆತನ ಸ್ಥಾನವೆಷ್ಟು ಹಿರಿದಾದುದು ಎಂಬುದನ್ನು ದೃಢಪಡಿಸುತ್ತವೆ.    (ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ